ಭಾನುವಾರ, ನವೆಂಬರ್ 27, 2011

ಒಂದು ಹುಳು ಮತ್ತು ಸಾವಿನ ಬೆಳಕು

ಒಂಟಿ ಕೊಳವೆ ದೀಪ, ಒಂದು ಹುಳು
ಜೊತೆಗೆ ನಾನು, ಸವಿದದ್ದು ಬೆಳಕು
ಅದೂ ಒಂಟಿ ನನ್ನ ಹಾಗೆ, ಬೆಳಕ
ಅರಸಿ ನನ್ನ ಜೊತೆಗೂಡಿತ್ತು!

ಎಲ್ಲಿತ್ತೋ ಈ ಮೊದಲು
ಯಾವ ಬೆಳಕ ಮೂಲೆಯಾ
ಆಸರೆಯ ಬಿಗಿದಪ್ಪಿ, ನನ್ನ ಹಾಗೆ
ಕೊರಗುತಿತ್ತೋ ಕತ್ತಲಿಲ್ಲದ
ಕೋಣೆಯೊಳಗೆ ಬಂಧಿಯಾದಂತೆ.

ಎದೆಯ ಒಂದು ನರದೊಳಗೆ
ನಡುಗಿಸಿದ್ದು ಭಯದ ಹನಿ ರಕ್ತ
ಹಲ್ಲಿ ಲೊಚಗುಟ್ಟಿದಂತೆ, ಹೇಳಿ
ಬರದ ಕೊನೆ ಎಂಬ ಅಳುಕು!
ಹಲ್ಲಿಯದೋ ಹೊಟ್ಟೆಪಾಡು
ಹುಳಕ್ಕೆ ಇವತ್ತು ಸಾವೇನೋ
ನನ್ನದು(?) ಉತ್ತರ ಗೊತ್ತಿಲ್ಲದ ಪ್ರಶ್ನೆ!

ನೋಡುತ್ತಲೇ ಇದ್ದೆ,
ಹಲ್ಲಿ ಹೊಟ್ಟೆ ತುಂಬಿಸಿ ಕೊಂಡಿತ್ತು
ನನ್ನದಿನ್ನೂ ಊಟವಾಗಿಲ್ಲ
ಅನ್ನದ ತಟ್ಟೆ ಕರೆದರೂ
ಹುಳ ನನ್ನ ಹೊಟ್ಟೆಯೊಳಗೆ
ಮರುಗಿದಂತಿತ್ತು,

ದೀಪ ಮಾತ್ರ ಬೆಳಗುತ್ತಲೇ ಇತ್ತು
ಎಲ್ಲದರ ಅರಿವ ಬಿಟ್ಟು
ಅದಕ್ಕೇನು ದಿನ ರೂಢಿ
ಇಂದು ಹುಳ, ನಾಳೆ ನಾನು
ಮತ್ತದೇ ಬೆಳಕು, ಮತ್ತೊಂದು ದಿನ
ತಿಂದು ತೇಗಿದ ಹಲ್ಲಿ ಕೂಡ
ಕರಗಲೇ ಬೇಕು ಅದರ ಬೆಳಕೊಳಗೆ..

ಶನಿವಾರ, ನವೆಂಬರ್ 26, 2011

ಸಿಕ್ಕವಳು ನನ್ನ ತಂಗಿ, ಮತ್ತೊಂದು ಬಿಳಿ ಹಾಳೆ

ಬರೆಯುತ್ತಾ ಹೋದೆ,
ಮೊದಲಿಗೆ ಹುಡುಗಿ ಸಿಕ್ಕಳು,
ತಲೆ ನೇವರಿಸಿ ತಂಗಿ ಎಂದು ಕರೆದೆ,
ತಲೆ ಭುಜಕಾನಿಸಿ ಅಣ್ಣ ಎಂದಳು
ಜೊತೆಯಿರುವೆ ಎಂದೆ ಎಂದೆಂದೂ
ಇನ್ನೇನು ಎರಡು ಸಾಲು ಬರೆಯಬೇಕೆಂದೆ..
ಹಿಂದೆಯೇ ನಾಯಿಯೊಂದು ಬಂದು ನಿಂತಿತು
ಬೊಗಳುತ್ತಿಲ್ಲ, ಕಣ್ಣು ಬಿಡುತಿದೆ
ನನ್ನ ನೋಡುತ್ತಿಲ್ಲ, ತಂಗಿಯ ಎದೆಯಲ್ಲಿ
ಅದರ ಕಣ್ಣು, ಮೂಗು ಅರಳಿಸಿ, ಜೊಲ್ಲು...
ಬರಹದೊಳಗೆ ಅವಳ ಇಟ್ಟೆ,
ನಾಯಿ ಬೊಗಳಿತು, ಬರಹಕ್ಕೆ
ಮೂಳೆ ಹೆಕ್ಕಿ ತಂದು ಬಿಸುಟಿದೆ
ನಾಯಿ ಹೋಗಲೊಲ್ಲದು, ಯಾಕೋ?
ನನ್ನ ಲೇಖನಿಯಲೇ ತಿವಿದೆ, ಕಚ್ಚುವ ಭಯವಿತ್ತು,
ಇಲ್ಲ, ಅಲುಗಾಡಲಿಲ್ಲ, ಜೊಲ್ಲು ಇನ್ನೂ
ಸುರಿಯುತ್ತಲೇ ಇತ್ತು, ಕಣ್ಣು ನೀಲಿಯಾಗಿತ್ತು
ಹ್ಮ್, ಇಲ್ಲ ನಾಯಿಯದು, ಮತ್ತದೇ ರಾಗ
ನನ್ನ ಬರಹವ ದಾಟಿ ಅವಳೆದೆಯ ಮೇಲೆ
ತನ್ನ ಜೊಲ್ಲ ಕಲಶವ ಇಡುವ ಆಸೆಯೇನೋ?
ನನ್ನ ಮನಸು ಒಂದು ಕ್ಷಣ ನಿರ್ದಯಿ
ಮುಳ್ಳಾಯಿತು ಪೆನ್ನು, ಚುಚ್ಚಿದೆ ನೀಲಿ ಕಣ್ಣ
ಅಲ್ಲಿ ರಕ್ತದೊಸರು, ಬರಹ ಕೆಂಪಾಗಿತ್ತು,
ನಾಯಿ ಓಡಿದರೂ, ತಂಗಿ ಉಳಿದಿದ್ದಳು
ಜೊಲ್ಲು ಸೋಕದ ನನ್ನ ಬರಹದ
ಬಿಳಿ ಹಾಳೆಯ ಮೇಲೆ ನಗುವ ಕಣ್ಣಿನ
ಮಂದಹಾಸವ ಬೀರುತ್ತಾ ಇಂದಿಗೂ...

ಶುಕ್ರವಾರ, ನವೆಂಬರ್ 25, 2011

ಅವಳ ನೆನಪಲಿ......

ಅಂಗಳದಲಿ ನಿಂತಿದ್ದೆ, ಅವಳ ನೆನೆಯುತ್ತ
ನೆನಪು ಮಾತ್ರ ಅವಳು, ಈ ಇಳಿ ಸಂಜೆಗೆ

ಮನೆ ಮುಂದೆ ಒಂದು ಗಿಡ, ಕೆಂಪು ಬಣ್ಣ,
ದಾಸವಾಳದ ಹೂವು ನಕ್ಕಿತ್ತು, ಎಳೆ ನಗು,
ಅವಳದೇ ಮುದ್ದು ನಗುವಿನಂತೆ, ಆಹ್ಲಾದ..

ಕಲ್ಲು ಮಣ್ಣೊಳಗಿಂದೆದ್ದ ಕುರುಚಲು ಹುಲ್ಲುಗಳ
ನಡುವೆ ಕಾಲ ಮೇಲೆತ್ತಿ ಬಂದ ಇರುವೆ ಕೂಡ
ನನ್ನ ಮೆದುಳೊಳಗೆ ಹರಿದಂತೆ ಕಚಗುಳಿ..
ಅಪ್ಪಿ ಅವಳಿತ್ತ ಮುತ್ತಿನಂತೆ, ರಸಸ್ವಾದ..

ಅಂಗಳದಲಿ ಚಳಿ ಹೊತ್ತ ತಿಳಿಗಾಳಿ ನನ್ನ
ಕಿವಿ ಕಚ್ಚಿ ಎಳೆದಾಗ ಅದರಲೂ ಅವಳದೇ
ನೆನಪು, ತಲೆಯಾನಿಸಿ ಭುಜಕೆರಗಿ ಕೂತಂತೆ
ಅವಳದೇ ಮನದ ತಣ್ಣನೆಯ ಪಿಸುಮಾತು
ನನ್ನ ಕಿವಿಯೊಳಗೆ ಗುನುಗುನಿಸಿದಂತೆ....

ಅಂದು ಇಳಿಸಂಜೆಯಲಿ ಬದುಕಿಗೆ
ಬಣ್ಣದ ಚಿತ್ತಾರ ಬರೆದ ಅವಳು, ಇಂದು
ಕತ್ತಲೆಯ ಮುಸುಕೆಳೆದು ಸೂರ್ಯನಂತೆ
ಮರೆಯಾಗುತ್ತಾಳೆ ಎಲ್ಲೋ ನೆನಪ ಬರೆದು
ಹೂವು, ಇರುವೆ, ಗಾಳಿಗಳ ಮಧ್ಯೆ ಬಂದು
ತೂರುತ್ತಾಳೆ, ಕಚಗುಳಿಯಿಡುತ್ತಾಳೆ
ನಾನೆಷ್ಟೇ ಬೇಡವೆಂದರೂ...!

ಶನಿವಾರ, ನವೆಂಬರ್ 12, 2011

ಎಲ್ಲಾ ಮುಗಿದ ಮೇಲೆ !!!

ಅಲ್ಲಿ ಮೌನ, ಹಾಸಿದ ಕಲ್ಲುಗಳೂ ಮಲಗಿದ್ದಾವೆ, ನಿಶ್ಯಬ್ದ
ಆ ಕಲ್ಲುಗಳ ಮೇಲೆ ಕೆತ್ತಿದ ದುಂಡನೆಯ ಹೆಸರು ಕೂಡ,
ಮಣ್ಣು ಮುಚ್ಚಲಾಗಿದೆ, ಎಂದೋ ಮಣ್ಣಿನ ಆಸೆಗೆ ಕೊನರಿ
ಹಾರಿದ ಜೀವಗಳೂ, ಆರಡಿಯ ಗುಂಡಿಯೊಳಗೆ ಈಗ ಸದ್ದಿಲ್ಲ!

ಮೇಲೆ ಮೂರಡಿಯ ಮಣ್ಣು, ಕಲ್ಲ ಹೊದಿಕೆಯ ಚಪ್ಪರ
ಮನಸು ಮೇಲೆ ಬಂದು ಕೂತಂತೆ, ಒಳಗೆ ಹೂತಿಟ್ಟ
ತನ್ನದೇ ಹೆಣವ ಮೆಟ್ಟಿ ನಿಂತು, ರೋದನ ಸದ್ದಿಲ್ಲದೇ!

ದೂರದಲ್ಲೆಲ್ಲೋ ಸುಟ್ಟ ಮಾಂಸದ ಒಗರು ವಾಸನೆ
ಅಂದು ತಾನಿಟ್ಟ ಕೊಳ್ಳಿಗೆ ಮುನ್ನೂರು ದೇಹಗಳು
ಕರಕಲಾದರೂ, ಸುಗಂಧ ಬೀರಿತ್ತು ಈ ಮೂಗು,
ಕೊರಗುತಿತ್ತು ಮನ ಎಲ್ಲಾ ಮುಗಿದ ಮೇಲೆ.. ಈಗ ನಿಶ್ಚಲ!

ಅಲ್ಲಲಿ ಬಿಸುಟ ಮೂಳೆಗಳು, ಜೊಲ್ಲ ಸುರಿಸಿ ನೆಕ್ಕಲು
ಒಂದು ನಾಯಿಯೂ ಬಂದಂತಿಲ್ಲ, ಬರಿಯ ಟೊಳ್ಳು,
ಮಾಂಸವಿಲ್ಲದೆ, ಈ ಸ್ಮಶಾನದ ಕಲ್ಲುಗಳಂತೆ..

ಬೆಳೆದು ನಿಂತ ಒಂಟಿ ಮರ ಕೂಡ ಭೀಭತ್ಸ ರಕ್ಕಸ,
ನೀರ ಹನಿಗಳಿಲ್ಲದಿದ್ದರೂ ರಕ್ತ ಕುಡಿದ ಮಣ್ಣ ಹೀರಿ,
ಮಂದ ಗಾಳಿಯೂ ಮೌನಿ, ತರಗೆಲೆ ಅಲುಗಾಡದಷ್ಟು

ತನ್ನೆದೆಯ ಮೇಲಿಟ್ಟ ಕಲ್ಲ ಚಪ್ಪಡಿಯ ಮೇಲೆ ಕೂತು
ತನ್ನದೇ ಮನಸು ನಕ್ಕಿದ್ದು ಎಲ್ಲೂ ಕೇಳಲೇ ಇಲ್ಲ
ಅಲ್ಲಿ ಯಾರಿಗೂ ಕೇಳಿಸದ ಮೌನ, ಎಲ್ಲರೂ ಮೌನಿ,
ತಾನೂ ಚಿರಮೌನಿ ಮೂರಡಿಯ ಮಣ್ಣೊಳಗೆ ಆರಡಿಯ ನಿದ್ದೆ !!!
=========
ಚಿತ್ರಕೃಪೆ: ಗೂಅಲ್ ಇಮೇಜಸ್

ಮಂಗಳವಾರ, ನವೆಂಬರ್ 8, 2011

ಎಲ್ಲ ಶೂನ್ಯ ಅದರೊಳಗೊಂದು ಮೌನ....!!!

ಒಂದು ಕೆರೆ ತಟದ ಕಲ್ಲು ಬಂಡೆಯ ಮೇಲೆ ಕೂತಿದ್ದೆ
ಮುಷ್ಠಿ ತುಂಬಿಟ್ಟಿದ್ದ ಕಲ್ಲುಗಳು ಒಂದೊಂದಾಗಿ
ಕೆರೆ ನೀರ ಮೌನವ ಮುರಿದು ವೃತ್ತ ರಂಗೋಲಿ
ಮಾತು ಹೊರಡುತ್ತಿಲ್ಲ, ಮೌನ ಮಡುಗಟ್ಟಿ...

ಕಿರಣಗಳ ರೆಕ್ಕೆ ಬಿಚ್ಚಿದ್ದ, ತಲೆಯ ಮೇಲೆ ಸೂರ್ಯ,
ಬಿಸಿ ಉಸಿರ ಮಳೆ, ಮನದ ಮೂಲೆಯಲಿ
ಬಿಳಿ ಮೋಡದ ಒಂದು ತುಂಡು ಹೊತ್ತ ಬಾನು
ಕಪ್ಪು ಅಡರಿ ಶುಭ್ರ ನೀಲಿ ಮರೆ ಮಾಚಿತ್ತು ...

ಎಲ್ಲಿ? ಗಾಳಿಯು ಮುಸುಕು ಹೊದ್ದು ಮಲಗಿತ್ತೇನೋ?
ತಿಳಿಯಲಿಲ್ಲ, ಅಲುಗಾಡದ ಮರದ ಎಲೆಗಳ ಮೇಲೆ
ನಿನ್ನೆ ರಾತ್ರಿಯೇ ಬಿದ್ದ ಮಂಜು ಹನಿ, ಕಣ್ಣೀರ
ಪೋಣಿಸಿ ಇಟ್ಟಂತೆ ಭಾಸ, ಅದು ಕಣ್ಣೀರಲ್ಲ!

ಚಿಟ್ಟೆಯೊಂದು ಹೆಗಲ ತಾಕಿ, ಹುಡುಕಿತ್ತು
ಅಲ್ಲಿ ಮಕರಂದವೆಲ್ಲಿಯದು, ಬರಿಯ ಚರ್ಮ
ಮತ್ತೆ ಹೂವ ಅರಸಿ ನಿಂತಾಗ ಅದರ ರೆಕ್ಕೆಯಲಿ
ಕಂಡ ಬಣ್ಣ ಚಿತ್ತಾರ ಕಣ್ಣ ಒಳಗೆ ಅಂಟಿಕೊಳಲಿಲ್ಲ!

ದಿಟ್ಟಿಸಿದೆ, ಎಲ್ಲೋ ಕಂಡ ತೀರ ಅತ್ತ ಕಡೆ
ಒಂದು ದೋಣಿ, ಹುಟ್ಟು ಹಾಕುವವನ ಕೈ
ಅಲುಗಾಟವಷ್ಟೇ ಕಂಡಿದ್ದು ತೇವ ತುಂಬಿದ
ಕಣ್ಣುಗಳ ನೀರ ಪರದೆಯಲ್ಲಿ, ಅವಿತು ನಿಂತು!