ಶನಿವಾರ, ನವೆಂಬರ್ 12, 2011

ಎಲ್ಲಾ ಮುಗಿದ ಮೇಲೆ !!!

ಅಲ್ಲಿ ಮೌನ, ಹಾಸಿದ ಕಲ್ಲುಗಳೂ ಮಲಗಿದ್ದಾವೆ, ನಿಶ್ಯಬ್ದ
ಆ ಕಲ್ಲುಗಳ ಮೇಲೆ ಕೆತ್ತಿದ ದುಂಡನೆಯ ಹೆಸರು ಕೂಡ,
ಮಣ್ಣು ಮುಚ್ಚಲಾಗಿದೆ, ಎಂದೋ ಮಣ್ಣಿನ ಆಸೆಗೆ ಕೊನರಿ
ಹಾರಿದ ಜೀವಗಳೂ, ಆರಡಿಯ ಗುಂಡಿಯೊಳಗೆ ಈಗ ಸದ್ದಿಲ್ಲ!

ಮೇಲೆ ಮೂರಡಿಯ ಮಣ್ಣು, ಕಲ್ಲ ಹೊದಿಕೆಯ ಚಪ್ಪರ
ಮನಸು ಮೇಲೆ ಬಂದು ಕೂತಂತೆ, ಒಳಗೆ ಹೂತಿಟ್ಟ
ತನ್ನದೇ ಹೆಣವ ಮೆಟ್ಟಿ ನಿಂತು, ರೋದನ ಸದ್ದಿಲ್ಲದೇ!

ದೂರದಲ್ಲೆಲ್ಲೋ ಸುಟ್ಟ ಮಾಂಸದ ಒಗರು ವಾಸನೆ
ಅಂದು ತಾನಿಟ್ಟ ಕೊಳ್ಳಿಗೆ ಮುನ್ನೂರು ದೇಹಗಳು
ಕರಕಲಾದರೂ, ಸುಗಂಧ ಬೀರಿತ್ತು ಈ ಮೂಗು,
ಕೊರಗುತಿತ್ತು ಮನ ಎಲ್ಲಾ ಮುಗಿದ ಮೇಲೆ.. ಈಗ ನಿಶ್ಚಲ!

ಅಲ್ಲಲಿ ಬಿಸುಟ ಮೂಳೆಗಳು, ಜೊಲ್ಲ ಸುರಿಸಿ ನೆಕ್ಕಲು
ಒಂದು ನಾಯಿಯೂ ಬಂದಂತಿಲ್ಲ, ಬರಿಯ ಟೊಳ್ಳು,
ಮಾಂಸವಿಲ್ಲದೆ, ಈ ಸ್ಮಶಾನದ ಕಲ್ಲುಗಳಂತೆ..

ಬೆಳೆದು ನಿಂತ ಒಂಟಿ ಮರ ಕೂಡ ಭೀಭತ್ಸ ರಕ್ಕಸ,
ನೀರ ಹನಿಗಳಿಲ್ಲದಿದ್ದರೂ ರಕ್ತ ಕುಡಿದ ಮಣ್ಣ ಹೀರಿ,
ಮಂದ ಗಾಳಿಯೂ ಮೌನಿ, ತರಗೆಲೆ ಅಲುಗಾಡದಷ್ಟು

ತನ್ನೆದೆಯ ಮೇಲಿಟ್ಟ ಕಲ್ಲ ಚಪ್ಪಡಿಯ ಮೇಲೆ ಕೂತು
ತನ್ನದೇ ಮನಸು ನಕ್ಕಿದ್ದು ಎಲ್ಲೂ ಕೇಳಲೇ ಇಲ್ಲ
ಅಲ್ಲಿ ಯಾರಿಗೂ ಕೇಳಿಸದ ಮೌನ, ಎಲ್ಲರೂ ಮೌನಿ,
ತಾನೂ ಚಿರಮೌನಿ ಮೂರಡಿಯ ಮಣ್ಣೊಳಗೆ ಆರಡಿಯ ನಿದ್ದೆ !!!
=========
ಚಿತ್ರಕೃಪೆ: ಗೂಅಲ್ ಇಮೇಜಸ್

8 ಕಾಮೆಂಟ್‌ಗಳು:

  1. ಬಹು ಸೊಗಸಾಗಿ ಮೂಡಿ ಬಂದಿರುವ ಈ ಕವನ ಕವಿಯ ಹೃದಯದಾಳದಲ್ಲಿ ಹುದುಗಿರುವ ಅವ್ಯಕ್ತ ನೋವೊಂದು ಕವನವಾಗಿ ಜನ್ಮ ತಾಳಿದೆ.ಕಾವ್ಯದ ಸುಂದರ ಅನುಭೂತಿ ಈ ಕವನ.ಸಮಾಜದಲ್ಲಿ ನಿತ್ಯ ನಡೆಯುತ್ತಿರುವ ವಾಸ್ತವ ಬದುಕಿನ ಘಟನೆಗಳು ಕವಿಯನ್ನು ದಿಗ್ಮೂಢನನ್ನಾಗಿಸಿದೆ.ತನ್ನೆದೆಯ ಮೇಲಿಟ್ಟ ಕಲ್ಲು ಚಪ್ಪಡಿ ಮೇಲೆ ಕೂತು... ತನ್ನದೇ ಮನಸ್ಸು ನಕ್ಕಿದ್ದು ಎಲ್ಲೂ ಕೇಳಲಿಲ್ಲವೆಂಬ ಕೂಗು ಅತ್ಯಂತ ಹೃದಯ ವಿದ್ರಾವಕವಾಗಿದೆ.ಇದೊಂದು ಸತ್ವಪೂರಿತ ಕವಿತೆ.ಅರ್ಥೈಸಲು ವಿಶಾಲ ದೃಷ್ಠಿಕೋನ ಬೇಕು.ಆಸ್ವಾದಿಸಿದೆ.):

    ಪ್ರತ್ಯುತ್ತರಅಳಿಸಿ
  2. ಹೂವಪ್ಪಾ, ಮನುಷ್ಯನ ಎಲ್ಲ ಅಹಂಕಾರಗಳನ್ನೂ ತೊಳೆದು ಹಾಕುವ ಶಕ್ತಿ ಮರಣಕ್ಕೆ ಮಾತ್ರ ಇದೆ.

    ಸಾವಿನ ಆನಂತರದ ಬದುಕು(!) ಹೇಗಿರುತ್ತದೋ ಗೊತ್ತಿಲ್ಲವಾದರೂ. ಮುಖ್ಯವಾಗಿ ಇಲ್ಲಿನ ಜಂಜಡಗಳಿಂದ ಹೊರಗೆ.

    ಉತ್ತಮ ಕಥಾ ವಸ್ತುವನ್ನು ಮನ ಮುಟ್ಟುವಂತೆ ಚಿತ್ರಿಸಿಕೊಟ್ಟ ನಿಮಗೆ ಶರಣು.

    ಪ್ರತ್ಯುತ್ತರಅಳಿಸಿ
  3. ದೇಹ ನಶ್ವರತೆಯ ಹಿಂದೆ ಮನುಜ ಮಾಡುವ ದೊಂಬರಾಟಗಳು ಒಂದು ಸಾವಿನ ಹೊಡೆತದಿಂದ ಭೂಗತ!

    ಸಾವಿನ ಆನಂತರದ ಚಿರು ನಿದ್ರೆ ಇಲ್ಲಿ ಗಾಢವಾಗಿ ಮೂಡಿಬಂದಿದೆ.

    "ಅಲ್ಲಲಿ ಬಿಸುಟ ಮೂಳೆಗಳು, ಜೊಲ್ಲ ಸುರಿಸಿ ನೆಕ್ಕಲು
    ಒಂದು ನಾಯಿಯೂ ಬಂದಂತಿಲ್ಲ, ಬರಿಯ ಟೊಳ್ಳು,
    ಮಾಂಸವಿಲ್ಲದೆ, ಈ ಸ್ಮಶಾನದ ಕಲ್ಲುಗಳಂತೆ.."

    ಈ ಸಾಲುಗಳು ಮನುಷ್ಯ ಬದುಕಿದ್ದಾಗಲೂ ಕೆಲವೊಮ್ಮೆ ನಿಜವಾಗಿ ಬಿಡುತ್ತವೆ.

    ಪ್ರತ್ಯುತ್ತರಅಳಿಸಿ
  4. ಹೊಸ ಹೊಸ ವಿಚಾರಗಳ ಬಗ್ಗೆ ಬರಹಗಳು ಬಂದಾಗಲೇ..ಆಕರ್ಷಣೀಯವಾಗಿರೋದು.

    "ಬಿರು ಬೆತ್ತಲೆಯ ಸುಳಿಗಾಳಿ ಬೀಸುವಿಕೆಗೆ ಸುಡುಗಾಡು ನಡುಗಿತ್ತು..
    ಚಳಿ ಅಡರಿತ್ತು ಮಣ್ಣಲ್ಲಿದ್ದ ಎಲುಬಿಗೆ..
    ತಡವರಿಸದೆ.. ಹಾರಿಬಿದ್ದು, ಎದ್ದು ಸಮಾದಿಯ ಮೇಲೆ ಕುಳಿತು
    ಸುಧಾರಿಸಿ.. ಮಾಂಸ ವಾಸನೆಯ ಅಗ್ಗಿಷ್ಟಿಕೆಯ ಮುಂದೆ ಚಳಿ ಕಾಯಿಸುತ್ತಿತ್ತು.."

    ಇದು ನೆನಪಾಯಿತು. ಯಾವಾಗಲೋ.. ಬರೆದದ್ದು.

    ಪುಷ್ಪಣ್ಣ ನಿಮ್ಮ ಬರಹದಲ್ಲಿ ಪದ ಪುಂಜಗಳು ಒಳಗೊಳಗೇ ಒಂದು ಸ್ಪಷ್ಟ ಚಿತ್ರಣ ಮೂಡಿಸುತ್ತೆ.
    ಕವನ, ಬರಹಗಳು ಆಪ್ತವೆನಿಸುವುದು ಹೀಗೆ.

    ಪ್ರತ್ಯುತ್ತರಅಳಿಸಿ
  5. ಸರ್ ಒಳ್ಳೆಯ ವಸ್ತು ನಿಷ್ಟೇ ಯನ್ನು ಇಟ್ಟಿಕೊಂಡು ಬರೆದಿರುವ ಈ ಕವನ ತುಂಬ ಚೆನ್ನಾಗಿದೆ... ಅರ್ಥಗಳು ಸ್ವಾರಸ್ಯಕರವಾಗಿದೆ ..

    ಪ್ರತ್ಯುತ್ತರಅಳಿಸಿ
  6. ಜೀವನದ ನಶ್ವರತೆಯನ್ನು ತೆರೆದಿಡುವ, ಜೊತೆಗೇ ಬದುಕಿದ್ದಾಗ ಸಾರ್ಥಕತೆಯನ್ನು ನಮ್ಮದಾಗಿಸಿಕೊಳ್ಳಬೇಕೆ೦ಬ ಆಶಯವನ್ನು ಹೊ೦ದಿರುವ ಅರ್ಥಗರ್ಭಿತ ಕವನ :)

    ಪ್ರತ್ಯುತ್ತರಅಳಿಸಿ