ಶನಿವಾರ, ಮಾರ್ಚ್ 31, 2012

ಜಡಮನಸ್ಸು ಮತ್ತು ಒಣಗದ್ದೆ!

ಮೊನ್ನೆ ಬೀಸಿದ ಬಿರುಸು ಮಳೆಗೆ
ತೊರೆಗಳಲಿ ಹರಿಯುತ್ತಿದ್ದ ನೀರಿಗೆ
ಅಡ್ಡಕಲ್ಲುಗಳನಿಟ್ಟು ನೀರು ಹಾಯಿಸಿದ್ದೆ
ಮೇ ತಿಂಗಳಿನ ಒಣಗಿದ ಗದ್ದೆಗೆ!

ಸೂರ್ಯಶಾಖಕೆ ಕಲ್ಲುಗಟ್ಟಿದ
ಕೆಸರಬಂಡೆ ಚುರುಗುಟ್ಟುತ್ತಿತ್ತು,
ನೀರ ಕುಡಿದು ಮತ್ತೆ ಉಸಿರು ಬಿಡುತ್ತಿತ್ತು!

ಹಾಯಿಸುತ್ತಲೇ ಇದ್ದೆ ಮಳೆನೀರ
ಮತ್ತೆ ಮತ್ತೆ, ಹೆಪ್ಪುಗಟ್ಟಿದ್ದ ಜಡ
ಮಣ್ಣಿನ ಗಂಟ ಬಿಡಿಸಲು!

ನೊಗ ಕಟ್ಟಿ ಎತ್ತ ಹೆಗಲಿಗೆ, ಮತ್ತೆ
ಅಣಿಯಾಗಿಸುವ ತವಕ ಕೆಸರಗದ್ದೆಯಲಿ
ಹದಗೊಳಿಸಿ ಪೈರ ಚಿಗುರಿಸಲು!

ಬೇಡುತ್ತೇನೆ ಮಳೆ ನಿಲ್ಲದಿರಲೆಂದು,
ಹರಿವ ತೋಡು-ತೊರೆಗಳು ಬತ್ತದಿರೆ
ನಾಟಿ ಚಿಗುರಿ, ಬಲಿತು ತೆನೆಗಟ್ಟಿದ
ಹಸಿರು ಪೈರ ಉಸಿರ ಸವಿಯಲು!

3 ಕಾಮೆಂಟ್‌ಗಳು:

  1. ತೋಡು ಅನ್ನುವ ಪದ ಬಳಕೆಯ ಬದಲಿಗೆ ತೋಪು-ಹಳ್ಳ-ತೊರೆ ಸರಿಯೆನಿಸಬಹುದೇನೋ ಅನ್ನಿಸಿತು. ಒಂದು ಆಶಯವನ್ನು ಕಾಣುತ್ತಿದ್ದೇನೆ ಕವಿತೆಯಲ್ಲಿ. ಮಳೆಗೆ ಕಾಯುವ ಜಡ್ಡು ಗಟ್ಟಿದ ಮಣ್ಣು, ಮೊದಲಿನ ಹದಕ್ಕೆ ಬರಬೇಕಾದರೆ ಮಳೆ ಬಂದ ಮೇಲೋ ಒಂದಷ್ಟು ಕೆಲಸವಿದೆ. ಅದು ಇಲ್ಲಿ ಕಂಡಿದ್ದೇನೆ. ಚೆನ್ನಾಗಿದೆ ಕವಿತೆ.

    ಪ್ರತ್ಯುತ್ತರಅಳಿಸಿ
  2. ಚೆನ್ನಾಗಿದೆ ಚೌಟರೇ. ನಿಮ್ಮ ಕವನಗಳಲ್ಲಿ ಒಳಾರ್ಥ ಇದ್ದೇ ಇರುತ್ತದೆ. ಅದನ್ನು ಸರಿಯಾಗಿ ಓದದೆ ಪ್ರತಿಕ್ರಿಯಿಸಲು ಹೋದರೆ ಬಣ್ಣಗೇಡೇ(ಬಾಯಿಬಿಟ್ಟರೆ ಬಣ್ಣಗೇಡು ಎಂಬಂತೆ).. ಅಷ್ಟೆಲ್ಲಾ ತಲೆ ಕೆಡಿಸಿಕೊಳ್ಳದೇ ಹೋದರೂ ಒಂದು ಸುಂದರ ಚಿತ್ರಣ ಮೇಲ್ನೋಟಕ್ಕೇ ಇರುತ್ತದೆ. ಉದಾ:- ಇಲ್ಲಿ ಹಳ್ಳಿಯ ಒಬ್ಬ ರೈತನ ಚಿತ್ರಣವೋ ಅಥವಾ ಇನ್ನಾವುದೋ ಓದುಗನ ಕಲ್ಪನೆಯ ಮೇರೆಗೆ ಮೂಡುತ್ತದೆ. ಒಳಹೊಕ್ಕಾಗ ಹಲತರದ ಅರ್ಥಗಳು ಹೊಳೆಯುತ್ತದೆ. ನಮ್ಮಂತ ಹೊಸಬರಿಗೆ ಹೀಗೆ ಹೊಳೆಯುವುದು ಕಷ್ಟವೇ.. ಆದರೂ ಈ ರೀತಿಯ ಕವನಗಳನ್ನ ಓದುತ್ತೋದುತ್ತಾ ಅಭ್ಯಾಸವಾಗುತ್ತಿರುವಂತೆ ತೋರುತ್ತಿದೆ. ಒಂದೊಳ್ಳೆಯ ಕವನಕ್ಕೆ ಅಭಿನಂದನೆಗಳು. ಇದಕ್ಕಿಂತ ಹೆಚ್ಚಿಗೆ ಹೇಳಿದರೆ ಮತ್ತೆ ಬಣ್ಣಗೇಡಾಗುತ್ತೇನೆಂಬ ಭಯದಲ್ಲಿ.. :-)

    ಪ್ರತ್ಯುತ್ತರಅಳಿಸಿ