ಭಾನುವಾರ, ಅಕ್ಟೋಬರ್ 28, 2012

ಹೂವಾದವರು!

ಇನ್ನೂ ಕತ್ತಲು ಭಾನಿರದ ಬಾನು
ಮೂಡಣದ ಕತ್ತಲಲಿ ಬೆಳಕು ಬಿರಿದಂತೆ
ಹೂವ ನಗು, ಹಸಿರ ಗಿಡದಿ ಸೂರ್ಯ!

ಬಿರಿದರಳಿ ಪುಷ್ಪ, ಯಾರ ಮುಡಿಗೋ?
ಅರೆಘಳಿಗೆ ಅರಿವಿರದಂತೆ ಘಮದಚ್ಚರಿ!
ಮನವ ಕಲಕಿ ಬರಸೆಳೆದು ನಾನಾತ್ಮೀಯ!

ಬಿರಿದಿದ್ದಾನೆ ಭಾನು ಬಿಸಿಲ ನಗು ಬಾನು,
ಅರಳಿ ನಿಂತ ಬದುಕರೆಘಳಿಗೆ ಬಸವಳಿದು,
ಬಾಡಿ ನಿಂತಾಗ, ಗೆಲ್ಲಿಗೂ ಭಾರ!

ಎಲೆ ದೂರ? ಹಸಿರ ತೊಟ್ಟು ಬಿಟ್ಟು
ಬಾಡಿದೆಸಳು ಬುವಿಗೆ, ಅಲ್ಲಿ ಮಣ್ಣು,
ಮುಚ್ಚಿ ಅರೆ ಕ್ಷಣ ಕಣ್ಣು, ಕಣ್ಣೀರು!
======

ಬುಧವಾರ, ಅಕ್ಟೋಬರ್ 17, 2012

ಮಾಧ್ಯಮದಧಮರಿಗೆ!

ಕೊರೆವ ಕೊರೆತಕೆ ಕೊನೆಯಿರದ
ಕೊನೆಮೊದಲಿಲ್ಲದ ಅರಿವಿನ ರೇಸು ಕುದುರೆ!
ಇದು ಮೀಡಿಯಾ ಕಣಣ್ಣ, ಮಾಯಾ ಮಾಧ್ಯಮ!

ಅಕಾಲ ಕವಡೆ, ಹಣೆಗೆ ಮೂರುಪಟ್ಟಿ
ಹೇಳಿದ್ದೆಲ್ಲ ವೇದವಾಕ್ಯ, ವೀಡಿಯೋ ಸಾಕ್ಷಿ!
ನೇರಪ್ರಸಾರಕೆ ನರಮಂಡಲವಿಲ್ಲದೆಯೆ ರಕ್ತ!

ಬಿಳೀಪಂಚೆ, ಕರಿಕೋಟು, ಕಾವಿಗಳ ನೆರಳು
ಕೋವಿ ಕಳುವಾದರೂ ನಡುರಾತ್ರಿಯಲಿ ಗುಂಡು!
ನೋಡುವವ ಇಣುಕಿದಾಗಲೆಲ್ಲ ನಿನ್ನೆಯದೇ ಚೆಂಡು!

ಎನಲುಂಟೆ ಹೀಗೂ ಉಂಟೆ? ತಡರಾತ್ರಿಯಲಿ ಕಟ್ಟೆಚ್ಚರ!
ಹುಚ್ಚರಬ್ಬರ ನಡುರಾತ್ರಿಯ ಕಡಲಳೆಗಳಂತೆ ಭೋರ್ಗರೆತ
ಕೆಡಿಸದಿರಿ ಸ್ವಾಸ್ಥ್ಯ ರಾಮನಗರ ಸ್ವಾಮಿಗಳ ಎಳೆತಂದು!

ಖಾಲಿಯಾಗಿವೆ ನಿಮ್ಮ ತಲೆಗಳು ಬೋರು ಹೊಡೆಸದಿರಿ,
ಬ್ರೇಕಿಂಗುಗಳಲ್ಲ ಎಲ್ಲ ವಾರ್ತೆಗಳು ಹಂದಿ ನೆಗೆದಂತೆ ಗುಂಡಿಗೆ!
ಮಂಡೆ ಬೋಳಿಸಿ ಕೈಕಟ್ಟಿದೊಡೆ ನೀವಲ್ಲ ಉತ್ತಮರು ವರದಿಗೆ!

ಮೊಂಡುತನ ಬಿಡಿ, ನಾವೆಲ್ಲವ ನೋಡುವ ಮರುಳರಲ್ಲ
ಮರುಗುತ್ತವೆ ನಮ್ಮ ಮನಗಳೆಂದು ನೀವೆಣಿಸದಿರಿ
ನಿಮ್ಮ ಬುಡುಬುಡಿಕೆ ನಾಲಗೆ ಕೆದರೋ ಕಾಟಕೆ!
======
ಚಿತ್ರಕೃಪೆ: ಗೂಗಲ್ ಇಮೇಜಸ್
============
ಪ್ರೇರಣೆ: Pavan Parupattedara [https://www.facebook.com/parupattedara]
ಮೂಲವಿಷಯ, ಕೆಲ ಸಾಲುಗಳ ಉದಾಹರಣೆಗಳು ನನ್ನಾತ್ಮೀಯ, ಪ್ರಿಯ ಮಿತ್ರ ಪವನ ಪಾರುಪತ್ತೇದಾರರ ಒಂದು ರಚನೆಯಿಂದ

ಶನಿವಾರ, ಅಕ್ಟೋಬರ್ 6, 2012

ನದಿ ಹರಿದು!

ತುಣುಕು ಹನಿಯ ಒಡಲಿಗೆ ಮಳೆಯ ಮುತ್ತುಗಳು
ಕೋಡಿ ಹರಿದು ನದಿ ಬೆಡಗಿನಲಿ ನೀರ ಮೆರವಣಿಗೆ!
ಏರುತಗ್ಗುಗಳಲ್ಲೆಲ್ಲ ಏರಿಳಿತ, ಅಬ್ಬರದ ಜಲಧಾರೆ,
ಬೆಟ್ಟಗಳೆರಡರ ನಡುವೆ ಧುಮುಕಿದಂತಲ್ಲಿ ಕಣಿವೆ!

ತಿರುವಿನಲಿ ಇಬ್ಭಾಗ, ಮಗದೊಮ್ಮೆ ಸಮಾಗಮ
ಬುಡಮೇಲು ಕೆಲವೊಮ್ಮೆ ಹೊಸರುಚಿಯ ಕಾವು!
ಒಳಹರಿವ ತಿಕ್ಕಾಟದಲಿ ಕಲ್ಲುಬಂಡೆಯ ಸವೆತ
ಬೆಚ್ಚನೆಯ ಓಟಕಿಲ್ಲಿ ತಡೆಯಿಲ್ಲ, ತಕರಾರಿಲ್ಲ!

ಊರು ಮುಳುಗಿಸಿ ಕಟ್ಟೆಯೊಳು ನೀರ ಬಸಿರು
ಕಾಲುವೆಯೊಳು ಹರಿವ ನೀರಿಗೆ ರೈತ ಜನನ!
ಬಂಜೆಯಾಗಲಿಲ್ಲ ಹೊಲಗದ್ದೆಗಳು, ನೀರ ಫಲಕೆ
ಎರಡೆಯೆಳೆಯ ಪೈರು ಹಸಿರ ಉಸಿರಿನ ಹೂರಣ!
======
ಚಿತ್ರಕೃಪೆ: ಗೂಗಲ್ ಇಮೇಜಸ್