ಮಂಗಳವಾರ, ಅಕ್ಟೋಬರ್ 1, 2013

ವಲಸೆ ಹಕ್ಕಿಯ ಕತೆ!

ಕಣ್ಣಬಿಟ್ಟವನೆದ್ದು ನಡೆದದ್ದು
ದೂರದೂರಿಗೆ, ಅಲ್ಲಿ ಬರವಿತ್ತೋ,
ಬಾಂದಳದಲಿ ರೆಕ್ಕೆ ಬೀಸುವಾಗ
ನೀರ ಸುಳಿವು, ಕೆರೆ ಮಿಂಚುತ್ತಿತ್ತೋ!

ಇರಬಹುದಿನ್ನೆರಡು ತಿಂಗಳಿಲ್ಲಿ
ಕಾಳಕೂಳನು ಹೆಕ್ಕಿ ತಿನ್ನುತ
ಹಸಿರೊಡಲಲಿ ಉಸಿರ ನೆಕ್ಕುತ
ಹುಡುಕಬೇಕಷ್ಟೇ ಹೊಸಗೂಡು!

ಹುಟ್ಟಿದೂರಲ್ಲ, ಭಯ ಒಳಗೊಳಗೆ
ಚಿಂತೆ, ಮೊಟ್ಟೆ ಇಡಬಹುದೇ ಇಲ್ಲಿ?
ನೆಲೆಯಿಲ್ಲ, ನೆಲೆಯಲ್ಲ, ನೆಲದ ಋಣವಷ್ಟೇ
ಇದ್ದೆರಡು ದಿನವಿಲ್ಲಿ ಉದರ ತಂಪು!

ಮತ್ತೆ ನೀಲಿಯಾಕಾಶ, ಮೇಲೆ ಸೂರ್ಯ,
ಕಾಲಡಿಗೆ ಒಣಗಿದೆಲೆ, ಅಲ್ಲಲ್ಲಿ ಬೆಂಕಿ
ಕೆರೆಬತ್ತಿ ಕೆಸರು ತಳದಿ ಒಣ ಹೆಂಟೆ,
ಬಿಚ್ಚಿ ಬೀಸಬೇಕಿದೆ ಮತ್ತೆ ರೆಕ್ಕೆ!

ಹುಡುಕಬೇಕಿದೆ ಊರು, ಹೊಸತು
ಕತ್ತಲೋ, ಬೆತ್ತಲೋ ನಿಲುಕದಲ್ಲಿ
ನಿಲ್ಲಲಾಗದು ಸ್ಪಷ್ಟ, ಸಾಗಬೇಕೆತ್ತಲೋ!
ಗೆಲ್ಲಹುಡುಕಬೇಕಿದೆ ಕತ್ತಲಾವರಿಸಿದಲ್ಲಿ!

====
ಚಿತ್ರಕೃಪೆ:http://siliconangle.com

ಗುರುವಾರ, ಸೆಪ್ಟೆಂಬರ್ 12, 2013

ಹುತ್ತದೊಳಗಿನ ಗೆಲುವು!

ಹುತ್ತದೊಳಗಣ ಹಾವು ಬುಸುಗುಡುವಾಗ
ಮೆತ್ತಗೆ ಚಿಂತಿಸುತ್ತಾ ಕೂತೆ, ಮಣ್ಣು ಯಾರದ್ದು?
ಗೆದ್ದೆನೆನಬಹುದು ನಾಗರ ನಾಲಗೆಯ ಹೊರಚಾಚಿ,
ಗೆದ್ದಲನು ನೆನಪಿನೆದೆಯೊಳಗಿಟ್ಟರೆಕ್ಷಣ ನಕ್ಕೆ!

ಹರಿಸಿ ಬೆವರನು ಬೆರೆಸಿ ಜೊಲ್ಲ ಮುದ್ದೆಗೈದು
ಕೊರೆದು ನೆಲವನು ಮಣ್ಣ, ಮೇಲೆತ್ತಿ ಗೂಡ
ಬದುಕಬೇಕೆನುವಾಗ ನುಸುಳುವವನಿಲ್ಲಿ ವಿಷ!

ಹೆಡೆಯೆತ್ತಿ ನಿಲುವುದಕೆ ಶ್ವಾಸ ಸಾಲುವುದಿಲ್ಲ
ಹಾವಹಲ್ಲ ಗಾತ್ರದ ಜೀವವು, ತೂತ ತೊರೆದು
ತೆರಳಬೇಕಲ್ಲಿ, ಉರಗದುದರದಿ ಉರಿವ ಮೊದಲು!

ಹೆಸರೆನಿತು ಬಲುಜೋರು, ಹೆಡೆಬಿಚ್ಚುವವರಿಗೆ,
ಮುರಿಯದಿದ್ದರೂ ಮೈ, ಬಲದೊಳಗೆ ಹುದ್ದೆ!
ಗೆದ್ದಲ ಗೆಲುವೇ? ಇಲ್ಲ, 'ಶೇಷ' ಸೋಲು ಎನಲೇ?
==

ಚಿತ್ರಕೃಪೆ: ಗೂಗಲ್ ಇಮೇಜಸ್

ಗುರುವಾರ, ಆಗಸ್ಟ್ 8, 2013

ಬಿದ್ದಂತೆಲ್ಲ ಕಾಯಿ?

ಯಾರದೋ ಕೊಕ್ಕಿನ ಪರಾಗಸ್ಪರ್ಶಕೆ
ಅದಾವುದೋ ಗಿಡದಿ ಹೂ ಚಿಗುರಿ ಕಾಳಾಗಿ
ಬಲಿತು ಹಣ್ಣಾಗಿ, ಒಳಗೊಳಗೆ ಬೀಜ
ಹೊರಗಣ ಒಡೆಯಲಾಗದ ನಿಷ್ಠುರ ಸಿಪ್ಪೆ!

ನಾರುತ್ತದೆ ಕೊಳೆತು, ಕಾಲ ಮೀರಿದರೆ,
ಇನ್ನಾರದೋ ಕೈಚಾಚುತ್ತಾರೆ ಆಸೆಯಲಿ
ಕಿತ್ತು ತಿನ್ನುವುದಕೆ, ಅರ್ಧ ಕಚ್ಚುವುದಕೆ!
ನಿಲ್ಲಬೇಕೆನಿಸುತ್ತದೆ ಎಲ್ಲೋ ಮೇಲೆ, ಇಲ್ಲಲ್ಲ!

ಹುಳಿ ಒಗರು ಕಾಯಿ ಸೊನೆ ಸೇರುವುದಿಲ್ಲ,
ಕೆಲವೊಮ್ಮೆ ಬಲಿತರೂ, ನಾಲಗೆಗೆ ಸಪ್ಪೆ,
ಒಪ್ಪುವುದಿಲ್ಲ ಸಿಹಿ, ಹುಳುಕಿರುವಾಗ,
ಹಿತ ಕಹಿ ಹಲಬಾರಿ ಕಚಗುಳಿಯಿಡುತ್ತದೆ!

ದಿನ ಬಂದಂತೆಲ್ಲ ತೊಗಟೆಗೂ ಭಾರ
ಒಣಗಿಬಿಡುತ್ತದೆ ಕಿತ್ತೆಸೆದು ದೊಪ್ಪನೆ
ಬಿದ್ದುದಕೆ ಮುಖಕೆ ಹಸಿ ಸೆಗಣಿಯ ಬಣ್ಣ,
ಓಹ್ ಗೊಬ್ಬರ, ನಗು ಬೀಜದೊಳಗೆ!

ಸುತ್ತ ಸುಡುಮಣ್ಣು, ಬಿಸಿಯೆದೆಯ ಬಿಸಿಲು,
ಬಾನಲಿ ಕಡಲ ಹನಿ ಹೀರಿದಾ ಕರಿ ಮೋಡ,
ಹಾರಿ ಬರುವ ಗಾಳಿ, ಧೂಳಕಣಗಳ ನಡುವೆ
ಮೊಳಕೆಯೊಡೆಯಬೇಕೆನಿಸುತ್ತದೆ ಅದರ ಮನಕೆ!

======
ಚಿತ್ರಕೃಪೆ:
http://www.123rf.com

ಸೋಮವಾರ, ಆಗಸ್ಟ್ 5, 2013

ಹಸಿವ-ಗುರಿ!

ಹಸಿವ ಬೆನ್ನ ಹತ್ತಿ ಹುಲ್ಲನರಸುತ್ತಾ
ಬಯಲಿಗಿಳಿದಿದ್ದೇವೆ ಬರಡಿಲ್ಲ ನೆಲ!
ಮೊಳೆತಿರಬಹುದಲ್ಲಿ ಹಸಿರಚಿಗುರು,
ಮೋಡಗಳಲ್ಲಿ ಹನಿಯಾಗಿ ಮುತ್ತಿಕ್ಕಿ!

ಹರಿವ ತೊರೆಗಳ ದಾಟಿ ಜಿಗಿದು
ನಡುವ ಬೇಲಿಯೊಳು ನುಸುಳಿ
ಹುಡುಕಬೇಕಲ್ಲಿ ಬದುಕ ಮುಗುಳ,
ಮಣ್ಣೊಳಗಿಂದೆದ್ದ ಮೆಲ್ಲುಬಳ್ಳಿ!

ಮೆರೆಯುವಂತಿಲ್ಲ ಬರಿಯ ನಡೆಯಲ್ಲಿ
ಮರೆಯಾಗಬಹುದುಸಿರು ಬಳಲಿ,
ಮರಿಯಾಸೆ ಮನದೊಳಗೆ ಮರಳಿ,
ಹೊರಳಿಯಿರಬಹುದೆಂಬ ಹರುಷದಲಿ!

=====

ಗುರುವಾರ, ಜುಲೈ 11, 2013

ಕಷ್ಟ-ಕಡಲು!

ಪಡುವಣದೆದೆಯಾಳದೊಳಗಿಂದೆದ್ದ
ಕರಿಮೋಡಗಳ ದಿಟ್ಟಿಸುತ್ತಾ ನಡೆದೆ,
ನೀಲಬಾನವಿತು ಕಪ್ಪಡರತೊಡಗಿತ್ತು ಕಣ್ಣು!

ಕುಳಿರ್ಗಾಳಿಯೊಡಗೂಡಿಯೊಂದಷ್ಟು
ಕಡಲಲೆಯ ಲವಣ ಮುಖಕೆರಚುತಿದ್ದಂತೆ
ಬಿರುಸ ಹೆಜ್ಜೆಗಳು ಮರಳೊಳಗಡಗುತಿದ್ದವು!

ಕರುಳಾಳದೊಳಗಿನಾಕ್ರಂದನವು
ಅಲೆಗಳಟ್ಟಹಾಸದಿ ಮಸುಕಾಗಿ
ಬಲೆಬೀಸಿ ಸೆಳೆದಂತೆ ಉಸಿರಕಣ!

ಮುಳುಗುತಿರಬಹುದೆನುವಂತೆ ಅನತಿ
ದೂರದೀ ನೌಕೆ, ತಾಳಿ ಹೊಡೆತಗಳ
ತೀರದಾಸೆ, ಮರಳಿ ದಡವ ಪಡೆವುದೆಂತು?

ಕಾಯುತ್ತಿದೆ ಕಾಲ? ಎತ್ತಿಡಲು
ಮರಳೊಳಗಿಂದ ಹೂತಹೆಜ್ಜೆಗಳ,
ಗಾಳಿ ಬಂದೆಡೆಗೆ ಹಾಯಿ, ನೌಕೆ!
======
ಚಿತ್ರಕೃಪೆ: ಗೂಗಲ್ ಇಮೇಜಸ್

ಶುಕ್ರವಾರ, ಜೂನ್ 7, 2013

ನನ್ನದಲ್ಲದ ಕವಿತೆ!

ನಡೆಯುತ್ತಾರೆಲ್ಲರೂ ರಸ್ತೆಯಲಿ
ನಿಧಾನವೋ, ಅವಸರವೋ,
ಅವರವರದೇ ಅವರವರಿಗೆ,
ಎಲ್ಲರದೂ ಒಂದು ಕತೆ, ವ್ಯಥೆ!

ಒಬ್ಬರಿಲ್ಲಿ ಕಿಟಕಿ ಮುಚ್ಚುವರಂತೆ,
ಮೊನ್ನೆ ಬಿದ್ದ ಮಳೆಗೆ ಧೂಳು ಬರದಿರಲೆಂದು,
ಮತ್ತೊಬ್ಬರಿಗಿದು ಊಟದ ಸಮಯ,
ಹೊಟ್ಟೆಬಿರಿದೆದ್ದು ಆಕಳಿಸುವರು ಕಡಲಲೆಯಂತೆ!

ಯಾರದೋ ಮನೆಯ ಕೋಣೆಗಳಲೊಂದಿಷ್ಟು
ರಾಗರಂಗು, ಪ್ರಣಯ ಕೇಳಿ!
ಮತ್ಯಾರದೋ ಅಂಗಳದಲಿ ಹೂವಿನ ಘಮ,
ಸೂರ್ಯ ನಗದಿದ್ದರೂ ಮೋಡ ಕವಿದು!

ಬಾಲಬಿಚ್ಚುತ್ತವೆ ಆಸ್ಪತ್ರೆಯ ಹೊಟ್ಟೆಗಳಿಂದ,
ಹೊಸಮುಖಗಳಲ್ಲಿ, ನಿಲ್ಲಿಸುವವರಿಲ್ಲ!
ಗಿಡುಗಗಳೂ ಹೊಂಚು ಹಾಕುತ್ತವಲ್ಲಿ
ಉರಿವ ಒಣ ಎಲುಬಿಗೆ, ಹಸಿದು
ನಿಲ್ಲಿಸುವವರಾರು ಕಾಲವನು?

ಯಾರೋ ಉಡುದಾರವನೆಳೆಯುತ್ತಾರೆ
ತಾವುಟ್ಟ ಉಡುಗೆಯದು ಜಾರಿದ್ದರೂ,
ಮಡಿಯೆನ್ನುವವರಿದ್ದಾರೆ ಒಳಗೆ ಮಣ್ಣಿಟ್ಟು
ಕಣ್ಣು ಕಾಣದವರಿದ್ದಾರೆ, ಕಿವಿಗೊಡದವರಿದ್ದಾರಂತೆ!
ಎಲ್ಲರಿಗೂ ಕಾಲ, ಎಲ್ಲದಕೂ ಕಾಲ
ಕಾಲ ನಿಲ್ಲುವುದಿಲ್ಲವಂತೆ ಕಾದು!

ಇದು ಕವಿತೆ, ನನ್ನದಲ್ಲದ ಕಾಲದ್ದು!

=======
ಚಿತ್ರಸೌಜನ್ಯ: ಗೂಗಲ್ ಇಮೇಜಸ್

ಮಂಗಳವಾರ, ಮೇ 28, 2013

ಆಯ್ಕೆ!

ಅಂದು ಕವಲೊಡೆದಿತ್ತು ಎಡಕೂ ಬಲಕೂ
ಸಾಗಲೆತ್ತ? ಮನವೇ ಆಯ್ಕೆ ನಿನಗಿತ್ತೆ!
ವೈಶಾಖದ ಝಳಕೆ ಒಣಗಿದೆಲೆಗಳ ಹಾಸು,
ಸವೆದು ನಿಂತಿದ್ದವೆರಡೂ ನನ್ನೆದುರು!

ಸಾಗಿದಂತಿದೆ ಬಂದವರೆಲ್ಲರೂ ಎಡಕೆ
ಕರಗಿ ನಿಂತಿದೆ ಹಾಸು ಪಾದಗಳ ಬಲಕೆ!
ಬಲವಿನ್ನೂ ಹಸಿರು, ಸಾಗಲೇ ನಾನಲ್ಲಿ?
ಅಹುದೆನುವ ನಿನ್ನುತ್ತರಕೆ ಹೆಜ್ಜೆ ಮರುಗಿತ್ತು!

ಎಡ ಬಿಡಬೇಕಲ್ಲವೆನುವ ಚಿಂತೆಯಲೂ
ನಾ ಬಲಕೆ ಎಡವೆನಗೆ ಬಲುದೂರವೀಗ,
ಮುಂದಡಿಯಿಡುವುದದೇನು ತಿರುಗುವುದಕೆ?

ಅಡಿಯಿಟ್ಟಾಗಿದೆ, ನಿಟ್ಟುಸಿರೊಂದೆ ಜೊತೆಯು
ಕೊಂಚವೂ ನೋವಿಲ್ಲ, ಚಿಂತೆಯೂ ಇಲ್ಲ,
ಹಸಿರಿರದಿರೂ, ಹಸಿವಿರೆ ನಡೆಯೊಳಗೆ!

===
ಚಿತ್ರಕೃಪೆ: ಗೂಗಲ್ ಇಮೇಜಸ್

ಮಂಗಳವಾರ, ಮೇ 21, 2013

ಹಾಸಿಗೆಯೂ, ಮನಸೂ!

ಮೇಲೆಳೆದ ಹೊದಿಕೆಯೊಳಗದರ ನಗು
ಒತ್ತಿದ್ದಷ್ಟು ತಗ್ಗುತ್ತದೆ ಮತ್ತೆ ಹಿಗ್ಗಿ,
ಮೆದುವದು ಮುದವನೀಯುತ್ತದೆರಗಿದೊಡೆ!

ಬಿದ್ದವನಿಗೊಂದಷ್ಟು ನಿದ್ದೆಯ ಸಾಂತ್ವನ
ಮಲಗಿದವನಿಗೊಂದಷ್ಟೊಳಗೊಳಗೆ ತಣಿವು
ಜ್ವರದುರಿ ಕೆಮ್ಮುಗಳಿಗೆಲ್ಲಾರಾಮದಿಂಬು!

ಮರುಗಿ, ಕೊರಗುವವನಿಲ್ಲಿ ಬರಿಯ
ಶಿರವಾನಿಸಿ ದೇಹವನೊರಗಿದರೆ ಕಾಲ ಚಾಚಿ
ಕಣ್ಣುರಿಯಿರದಲ್ಲಿ, ಹೀರಿ ಬಿಸಿ ಹನಿಯ!

ಮರದಮಂಚದಡಿಪಾಯದೊಳು ನಿಂದು
ಬೆಚ್ಚಗಿರಿಸುತ್ತದೆ ಬಹುಪಾಲು,
ಬೇಗನೊಣಗುವುದಿಲ್ಲ ಒದ್ದೆಯಾದೊಡೆ!

ಹತ್ತಿಯದು ಒಳಗೆ, ಮೆತ್ತನೆಯ ಮೆತ್ತೆ
ಮತ್ತೆ ಮತ್ತೆ ತಲೆಯಾನಿಸುತ್ತೇನೆ
ನೋವಾದಾಗಲೆಲ್ಲ, ಬಿಗಿದಪ್ಪಿಕೊಳುತ್ತೇನೆ...
ವ್ಯತ್ಯಾಸವೇನಿಲ್ಲವಿದಕೂ ಮನಕೂ!

===

ಭಾನುವಾರ, ಏಪ್ರಿಲ್ 28, 2013

ಕೃತಿ!

ಯಾರೋ ಸಾರನೆರೆಯಬಹುದೆಂದು
ಎಲೆಯಲೊಂದಿಷ್ಟು ಅನ್ನವ
ಗುಡ್ಡೆ ಮಾಡಿಟ್ಟು ಕಾಯುತ್ತಿದ್ದೇನೆ
ಸೌಟುಗಳು ಯಾರ ಕೈಯಲ್ಲೂ ಕಾಣುವುದಿಲ್ಲ!

ಸಾರಿನ್ನೂ ಕುದಿಯುತ್ತಿರಬಹುದೋ?
ಸಾರೊಳಗಿನ ಬೇಳೆಯಿನ್ನೂ ಬೆಂದಿಲ್ಲದಿರದೋ
ಕೇಳಬೇಕೆಂದರಲ್ಲಾರದೂ ಸುಳಿವಿಲ್ಲ....
ಅಪ್ಪಣೆಯ ವಿನಹ ಅಡುಗೆ
ಮನೆಗವಕಾಶವಿಲ್ಲವೆಂಬ ಬೋರ್ಡಿದೆ ಹೊರಗೆ!

ನಾನು ಕಾಯುತ್ತಿಲ್ಲ, ನನ್ನೆಲೆಯೊಳಗಣ ಅನ್ನ,
ಹೊಟ್ಟೆ ಕೇಳುತಿಲ್ಲ, ನಿಜಕೂ ಹಸಿವಿಲ್ಲ ನನಗೆ!
ಎಲೆಯನ್ನ ಖಾಲಿ ಮಾಡುವುದು ಧರ್ಮವೆನಗೆಂದು
ಪಕ್ಕದವರಂದರೆಂದು ಕಾಯುವೇ ಸಾರಿನ ಸಾರಕೆ,
ಸೌಟುಗಳಿಲ್ಲದಿರಬಹುದೆನುವ ಚಿಂತೆ ನನಗಿಲ್ಲ!

====

ಸೋಮವಾರ, ಮಾರ್ಚ್ 18, 2013

ಬರೆವವರು!

ಬಣ್ಣಬಳಿದ ಗೋಡೆಗಂಟಿದ ಹಲಗೆಯಲೊಂದಿಷ್ಟು
ರೇಖೆಗಳ ಎಳೆದು ಬಿಡಿಸಿ ಗೀಚಿಹೋದವರೆಷ್ಟೋ?
ನಿನ್ನೆ ಬಂದವರಿಂದಿಲ್ಲ,ಇಂದಿನವರದು ಮುಂದಿಲ್ಲ
ನಿಂತಲ್ಲೇ ನಿಲಲಿಲ್ಲ, ಭಿನ್ನವದು ಚಿತ್ರ ಹಲಗೆಯೊಳು!

ಕರಿಬಣ್ಣದ ಕಡ್ಡಿಯೊಳು ಬರೆಯೆಳೆವ ಹಲವರು
ಹಲಗೆ ಬಿಳಿ ಕಂಡರಾಗದಂತೆ ಕೆಂಡವವರ ಮೊಗ,
ಅರಿಯಲಾಗದಕ್ಷರಗಳ ಬರವಣಿಗೆ ಕೆಲವರದು
ಮೊಂಡ-ಮೋಟು ಗೀಚುಗಳಲ್ಲೇ ನೀತಿಪಾಠ!

ಕರಿಯದಾದರೇನು ಕಡ್ಡಿ, ಗೀಚಿ ದುಂಡಗೆ
ದೋಚುವವರಿಹರು ಮನಸ, ಬೆರೆಯುವರು
ಗೆರೆಗಳಲೇ ಬರೆದು, ಬರೆಗಳ ಬಿಡಿಸೊರೆಸಿ
ಮರೆಯಲಾಗದಂತೆ ಮರೆಯಾಗುವವರಿಹರು!

ಬಂದವರೆಲ್ಲ ಬಳಿಯಿರಲಿ, ಬರೆಯುತಲಿ ದಿನವೂ
ಬರೆಯಾದರೂ ಬರೆಯಿರಿ, ಬರೆದು ಬೆರೆಯಿರಿ
ಮರೆಯದಿರಿ ಹಲಗೆಯ ನಿಮ್ಮದೇ ಗೀಚುಗಳಲಿ
ನೋವು-ನಲಿವುಗಳ ಅದರೆದೆಯ ಆಳಕ್ಕಿಳಿಸಿ!

=====
ಚಿತ್ರಕೃಪೆ: ಗೂಗಲ್ ಇಮೇಜಸ್

ಸೋಮವಾರ, ಫೆಬ್ರವರಿ 4, 2013

ಚರಂಡಿ ಮತ್ತು ನನ್ನೆದೆ!

ಯಾರದೋ ಬಚ್ಚಲೊಳಗಿಂದೊಸರುವೊಂದಷ್ಟು ರಾಡಿಗೆ,
ಕೊಳೆತು ನಾರಿದವೆಲ್ಲವೂ ಒಳಸೇರುತ್ತವೆ ಎಲ್ಲಿಂದಲೋ
ಇಣುಕುತ್ತವಲ್ಲಲ್ಲಿ ಹುಳು ಇಲಿ ಹೆಗ್ಗಣಗಳು ಒಳನುಸುಳಲು!

ಒಳಗೊಳಗಿನ ವಾಸನೆಗೆ ಹಾಸಿದ ಕಲ್ಲುಚಪ್ಪಡಿ ಮೌನ
ಹಾಯ್ವ ದಾರಿಹೋಕರ ಮೂಗಿಗೊಂದಿಷ್ಟು ದಿವ್ಯದ್ರವ್ಯ
ಅವರಿವರು ಉಗಿವ ಜೊಲ್ಲನೀರ ಜೊತೆ ಧೀರ್ಘಧ್ಯಾನ!

ಸಾಗುತ್ತಿದೆ ಪಯಣ ತೆರೆ ತೆರೆದು ಹರಿಹರಿದು ಮತ್ತಷ್ಟು
ಕೊಳಕಿಗೇನು ಬರವೇ ಇಲ್ಲೆಲ್ಲ, ಉಚಿತ ಸುರಿವವರಿರುವೆಡೆ
ಎಸೆದೆಸೆದು ಕಸವ ನನ್ನೆದೆಯ ಹರಿವಿಗೆ, ಸುರಿಸುರಿದು!

ಇನ್ನೇನು ಕಾಲಬರಬೇಕು ಬಾನೊಳು ಮೋಡಮೂಡಲು
ನೀರ ಬಸಿರಹೊತ್ತು ನಲಿನಲಿದು ಬಿರುಸಿನಲಿ ಹರಿದುಬರಬೇಕು
ಕೊಳೆಯುಳಿಸದಂತೆ ಚರಂಡಿಯೆನುವ ನನ್ನೆದೆಯಲಿ!

==============================
ಚಿತ್ರಕೃಪೆ: ದಿ ಹಿಂದು ಡಾಟ್ ಕಾಮ್.